ಪೀಲ್, ರಾಬರ್ಟ್
1788-1850. ಇಂಗ್ಲಿಷ್ ರಾಜನೀತಿಜ್ಞ. ಲ್ಯಾಂಕಷೈರಿನ ಶ್ರೀಮಂತ, ಕ್ಯಾಲಿಕೋ ಮುದ್ರಕನಾದ ರಾಬರ್ಟ್ ಪೀಲನ ಮಗ. 1809 ರಲ್ಲಿ ಟೋರಿ ಪಕ್ಷದ ಸದಸ್ಯನಾಗಿ ಪಾರ್ಲಿಮೆಂಟನ್ನು ಪ್ರವೇಶಿಸಿದ. 1810-12 ರಲ್ಲಿ ಯುದ್ಧ ಮತ್ತು ವಸಾಹತುಗಳ ಅಧೀನ ಕಾರ್ಯದರ್ಶಿಯಾಗಿದ್ದ. 1812 ರಲ್ಲಿ ಐರ್ಲೆಂಡಿಗೆ ಮುಖ್ಯ ಕಾರ್ಯದರ್ಶಿಯಾಗಿ, 1818 ರ ವರೆಗೂ ಆ ಸ್ಥಾನದಲ್ಲಿದ್ದ. 1828-30 ರಲ್ಲಿ ವಿಲಿಂಗ್ಟನ್ ಡ್ಯೂಕನ ಸಂಪುಟದಲ್ಲಿ ಗೃಹ ಕಾರ್ಯದರ್ಶಿಯಾಗಿದ್ದ ಪೀಲ್ ಪರಿಸ್ಥಿತಿಯ ಒತ್ತಡದಿಂದಾಗಿ ರೋಮನ್ ಕ್ಯಾತೊಲಿಕರ ವಿಮೋಚನೆಗೆ ಸೂಚನೆಯನ್ನು ಮಂಡಿಸಬೇಕಾಯಿತು. 1834-35 ಮತ್ತು 1841-46 ರಲ್ಲಿ ಇವನು ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದ. ರಾಷ್ಟ್ರದ ಬಜೆಟ್ಟನ್ನು ತೂಗಿಸಲು ವರಮಾನ ತೆರಿಗೆಯನ್ನು ಜಾರಿಗೆ ತಂದ. ಇಂಗ್ಲಿಷ್ ಬ್ಯಾಂಕಿಂಗ್ ಪದ್ಧತಿಯನ್ನು ಪುನವ್ರ್ಯವಸ್ಥೆಗೊಳಿಸಿದ. ಐರ್ಲೆಂಡಿನಲ್ಲಿ ಸುಧಾರಣೆಗಳು ಬಂದವು. ಧಾನ್ಯದ ಕಾನೂನುಗಳು ರದ್ದಾದವು. ಪ್ರಭಾವಶಾಲಿ ಪ್ರಚಂಡ ವಾಗ್ಮಿಯಾದ ಪೀಲ್ ಸಾರ್ವಜನಿಕರ ಪರವಾಗಿ ತನ್ನ ಕರ್ತವ್ಯವೇನೆಂಬುದನ್ನು ಅರಿತಿದ್ದ. ಉಕ್ಕಿನಂಥ ನಿರ್ಧಾರವುಳ್ಳವನಾಗಿದ್ದ, ಎಂಥ ವಿರೋಧವನ್ನೂ ಪ್ರತಿಭಟಿಸುವ ಸ್ಥೈರ್ಯ ತಳೆದಿದ್ದ. ಸಾರ್ವಜನಿಕರ ಹಿತಚಿಂತನೆಯ ದೃಷ್ಟಿಯಿಂದ ಅಗತ್ಯವಾದಲ್ಲಿ ತನ್ನ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವ ಧೈರ್ಯವೂ ಅವನಲ್ಲಿತ್ತು. ಪೀಲ್ 1850 ರಲ್ಲಿ ತನ್ನ ಮನೆಯಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡು ತೀರಿಕೊಂಡ.									    (ಬಿ.ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ